ಭೂವಿಜ್ಞಾನಿ ಮತ್ತು ಭೂಗರ್ಭ ಶಾಸ್ತ್ರಜ್ಞ ಪರೀಕ್ಷೆ 2018 ರ ಸುಲಭ ತಯಾರಿ ಸೂತ್ರಗಳು

  2018ರ ಭೂವಿಜ್ಞಾನಿ ಹಾಗು ಭೂಗರ್ಭ ಶಾಸ್ತ್ರಜ್ಞ ಪರೀಕ್ಷೆಯ ವೇಳಾಪಟ್ಟಿಯನ್ನು ಕೇಂದ್ರ ಲೋಕಸೇವಾ ಆಯೋಗವು ಪ್ರಕಟಿಸಿದೆ. ಪರೀಕ್ಷೆಯು ಜೂನ್ 29, 30 ಹಾಗು ಜುಲೈ 1ರಂದು ನಡೆಯಲಿದೆ. ಈಗಾಗಲೇ ಪರೀಕ್ಷಾ ತಯಾರಿಯಲ್ಲಿ ತೊಡಗಿರುವವರು, ಸ್ನಾತಕೋತ್ತರ ಪದವಿ(Masters) ಓದುತ್ತಿರುವವರು,ಕೆಲಸದಲ್ಲಿದ್ದೂ ಸಮಯ ಹೊಂದಿಸಿಕೊಂಡು ಓದಬೇಕೆಂಬುವವರಿಗೆ ಒಂದು ಸುಲಭ ಉಪಾಯ:

  ಈ ಪರೀಕ್ಷೆಯು ಕ್ರಮವಾಗಿ ಮೂರು ದಿನಗಳ ಕಾಲ ನಡೆಯುತ್ತಿದ್ದು ಇಂಗ್ಲೀಷ್ ಪತ್ರಿಕೆಯನ್ನು ಒಳಗೊಂಡು ಒಟ್ಟು ಐದು ಪತ್ರಿಕೆಗಳಿರುತ್ತವೆ. ಮುಖ್ಯ ವಿಷಯವನ್ನಾಗಿ ಭೂಗರ್ಭ ಶಾಸ್ತ್ರವನ್ನು ಆಯ್ಕೆ ಮಾಡಿಕೊಂಡಿದ್ದರೆ ಒಟ್ಟಾಗಿ 19 ವಿಷಯಗಳನ್ನು ಅಭ್ಯರ್ಥಿಯು ಅಭ್ಯಸಿಸಬೇಕಾಗುತ್ತದೆ. ಮೂರು ವರ್ಷ ಪದವಿ, ಎರಡು ವರ್ಷ ಸ್ನಾತಕೋತ್ತರ, ಜೊತೆಯಲ್ಲಿ PhD ಪದವಿ ಇದ್ದು, ಉಪನ್ಯಾಸಕರಾಗಿ ಅಥವಾ ವಿಧ್ಯಾರ್ಥಿಯಾಗಿದ್ದರೂ ಕೂಡ 19 ವಿಷಯಗಳು ಎಂದರೆ ಎಂಥವರನ್ನೂ ಎದೆಗುಂದುವಂತೆ ಮಾಡುತ್ತದೆ. ಜೊತೆಯಲ್ಲಿ ಈಗ ಮಾತ್ರವೇ ಪರೀಕ್ಷಾ ತಯಾರಿಯನ್ನು ಶುರುಮಾಡಬೇಕು ಎಂದುಕೊಂಡರಂತೂ ಮುಗಿದೇ ಹೋಯಿತು. ಈ ವರ್ಷ ಸುಮ್ಮನೆ ಹೋಗಿ ನೋಡೋಣ, ಮುಂದಿನ ಸಲ ಖಂಡಿತವಾಗಿಯೂ ಪರೀಕ್ಷೆಗೂ ಮುನ್ನ ಎಲ್ಲಾ ಪಠ್ಯಕ್ರಮವನ್ನು ಓದಿ ಮುಗಿಸುತ್ತೇನೆ ಎಂದುಕೊಳ್ಳುವವರೇ ಹೆಚ್ಚು. ಹಾಗೆ ಅಂದುಕೊಳ್ಳುವವರಲ್ಲಿ ನೀವೂ ಒಬ್ಬರಾಗಿದ್ದರೆ ಸ್ವಲ್ಪ ನಿಧಾನಿಸಿ. ನೀವು ಹಾಗೆ ನಿರ್ಧರಿಸುವ ಅವಶ್ಯಕತೆ ಇಲ್ಲ. ನೀವು ಈ ಬಾರಿಯೇ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಹಾಗೆ ತಯಾರಿಯನ್ನು ಮಾಡಿಕೊಳ್ಳಬಹುದು. ಮೊದಲಿನಿಂದ ಓದದೇ ಇದ್ದರೂ ಕೂಡ.

  ಪರೀಕ್ಷೆಗೆ ಒಟ್ಟು 136 ದಿನಗಳು ಉಳಿದಿವೆ. ಇಂದಿನಿಂದ ಪ್ರಾರಂಭಿಸಿ. ಒಂದು ಪತ್ರಿಕೆ ಆರು ಮುಖ್ಯ ವಿಷಯಗಳ ಪಠ್ಯಕ್ರಮವನ್ನು ಒಳಗೊಂಡಿದೆ. ಹಾಗೆ ಒಟ್ಟು 18 ಮುಖ್ಯ ವಿಷಯಗಳ ಪಠ್ಯಕ್ರಮ. ಕೊನೆಯ ಪತ್ರಿಕೆ ಪೂರ್ಣ ಪ್ರಮಾಣದಲ್ಲಿ Hydrogeologyಯ ಪಠ್ಯಕ್ರಮವನ್ನೇ ಒಳಗೊಂಡಿರುವುದರಿಂದ ಅದನ್ನು ಒಂದು ವಿಷಯವನ್ನಾಗಿ ಪರಿಗಣಿಸಿದರೆ ಒಟ್ಟಾಗಿ 19 ವಿಷಯಗಳು.

  ಈಗ ಪರೀಕ್ಷಾ ತಯಾರಿಗೆ ಬಂದರೆ, ನಿಮ್ಮ ಪರೀಕ್ಷಾ ತಯಾರಿ ನಿರಂತರವಾಗಿರಬೇಕು. 136 ದಿನಗಳಲ್ಲಿ ಕನಿಷ್ಠ ಪಕ್ಷ 120 ದಿನಗಳ ನಿರಂತರತೆ ಇರಲೇ ಬೇಕು. ಇಲ್ಲದಾದಲ್ಲಿ ಈ ತಯಾರಿಯ ಭೂಮಿಕೆಯಲ್ಲಿ ಏರುಪೇರಾಗುತ್ತದೆ. ನಾವೆಲ್ಲಾ ಪರೀಕ್ಷೆಯ ಹಿಂದಿನ ರಾತ್ರಿ ಇಡೀ ಪಠ್ಯಕ್ರಮವನ್ನು ಮುಗಿಸಲು ಪ್ರಯತ್ನಿಸಿ ಸೋಲುವುದನ್ನು ನೋಡಿದ್ದೇವೆ, ಮಾಡಿದ್ದೇವೆ. ಆದರೆ, ಅಂತಹ ಕಷ್ಟ ಬೇಡ ಎನ್ನುವವರಿಗಾಗಿ ಈ ಮಾರ್ಗ.

  ಈ ಮಾರ್ಗದಲ್ಲಿ ಇರುವ ಸುಲಭ ಉಪಾಯವಿಷ್ಟು. ಪ್ರತಿದಿನ ಒಂದು ಪತ್ರಿಕೆಯಲ್ಲಿ ಇರುವ ಆರು ಮುಖ್ಯ ವಿಷಯಗಳಿಂದ ತಲಾ ಒಂದೊಂದು ಪ್ರಶ್ನೆಗೆ ಉತ್ತರವನ್ನು ಓದುವುದು ಅಥವಾ ಒಂದು ವಿಷಯವನ್ನು ಓದುವುದು. ಮನನ ಮಾಡುವುದು. ಆಗ ಒಂದು ದಿನಕ್ಕೆ ಆರು ಪ್ರಶ್ನೆಗಳಿಗೆ ಉತ್ತರ ತಿಳಿದಂತಾಗುವುದು. 19 ವಿಷಯಗಳಿಂದ ಒಟ್ಟಾಗಿ ಸುಮಾರು ಅಂದಾಜು 800 ವಿಷಯಗಳಿವೆ. ಪ್ರತಿನಿತ್ಯ 6-7 ವಿಷಯಗಳಂತೆ 840 ವಿಷಯಗಳನ್ನು ಅಭ್ಯರ್ಥಿಯು ಮುಗಿಸಬಹುದು. ಉದಾಹರಣೆಗೆ Geology Paper 1 ಪತ್ರಿಕೆಯಲ್ಲಿ Section C : Geodynamics ಒಂದು ಮುಖ್ಯ ವಿಷಯ. ಅಲ್ಲಿ ಬರುವ Earth and its internal structure ಒಂದು ಉಪವಿಷಯ. ಈ ರೀತಿ ಲೆಕ್ಕ ಹಾಕಿದಾಗ Geology – Paper I, II, III ಹಾಗೂ Hydrogeology (ಒಂದು ಮುಖ್ಯ ವಿಷಯವನ್ನಾಗಿ ಪರಿಗಿಣಿಸಿ)ಯನ್ನು ಸೇರಿಸಿದಾಗ ಒಟ್ಟು 19 ಮುಖ್ಯ ವಿಷಯಗಳು, ಸುಮಾರು ಅಂದಾಜು 800 ಉಪವಿಷಯಗಳು.

  ಆಶ್ಚರ್ಯವೆನಿಸುತ್ತದೆ!!!. ಆದರೆ ಇದು ಅತಿ ಸುಲಭ. ಹೇಗೆ ಶಾಲಾ-ಕಾಲೇಜುಗಳಲ್ಲಿ ಪಠ್ಯಕ್ರಮವನ್ನು ಮುಗಿಸುತ್ತಾರೋ ಅದೇ ಮಾರ್ಗ ಇಲ್ಲಿ ಕೂಡ. ಇದನ್ನು ಅಳವಡಿಸಿಕೊಳ್ಳಲು ಇನ್ನೊಂದು ಪರ್ಯಾಯ: ವಾರಕ್ಕೆ ಏಳು ದಿನ. ಈ ಪರೀಕ್ಷೆಯಲ್ಲಿ ಒಟ್ಟು ನಾಲ್ಕು ಪತ್ರಿಕೆಗಳು (ಇಂಗ್ಲಿಷ್ ಬಿಟ್ಟು), 19 ಮುಖ್ಯ ವಿಷಯಗಳು. ಪ್ರತಿದಿನ ಒಂದು ಪತ್ರಿಕೆಯಂತೆ ಅಂದರೆ ಮೂರು ದಿನಗಳಲ್ಲಿ ಕ್ರಮವಾಗಿ ಮೂರು ಪತ್ರಿಕೆ. ಕೊನೆಯ ವಿಷಯ Hydrogeologyಯಲ್ಲಿ ಒಂದು ಪ್ರಶ್ನೆಯನ್ನು ಈ ವಿಷಯಗಳಲ್ಲಿ ಸೇರಿಸಿದರೆ ದಿನಕ್ಕೆ 7 ಪ್ರಶ್ನೆಗಳು 3 ದಿನಕ್ಕೆ ಮೂರು ಪತ್ರಿಕೆ. ಒಂದು ವಾರಕ್ಕೆ ಎರಡು ಬಾರಿಯಂತೆ ಓದಿದರೆ 120 ದಿನ ಎಂದರೆ 17 ವಾರಗಳಿಗೆ 40 ಬಾರಿ (ಆವರ್ತನ, cycle) ಓದಿದ ಹಾಗಾಯಿತು. 40 ಬಾರಿಗೆ ಪ್ರತೀ ಸಲ 7 ಪ್ರಶ್ನೆಯಂತೆ ಓದಿದರೆ 840 ಪ್ರಶ್ನೆಗಳಿಗೆ ಉತ್ತರ ಓದಿದ ಹಾಗಾಯಿತು. ಯಾವ ವಿಷಯವನ್ನೂ ಬಿಡದೆ, ಪರೀಕ್ಷಾ ಒತ್ತಡವಿಲ್ಲದೆ ಆರಾಮವಾಗಿ ಓದಿದರೆ ನೀವು ಇನ್ನು ಉಳಿದಿರುವ 120/130 ದಿನಗಳಲ್ಲಿ ಈ ಪರೀಕ್ಷೆಗೆ ಸರ್ವಸಿದ್ಧರಾಗುವಿರಿ.